Saturday 19 July 2014

ಹೆಣ್ಣು ಮಕ್ಕಳ ನಾಪತ್ತೆ ಎಂಬ ಮಾಯಾಜಾಲ - ರೂಪ ಹಾಸನ




14 ವರ್ಷದ ಆ ಬಾಲೆ ತನ್ನ ಟ್ಯೂಷನ್ ಮುಗಿಸಿ ಸಂಜೆಯ ಮಬ್ಬುಗತ್ತಲಿನಲ್ಲಿ ಮನೆಗೆ ಮರಳುತ್ತಿರುವಾಗ, ಹೆಂಗಸೊಬ್ಬಳು ಹತ್ತಿರ ಬಂದು ಯಾವುದೋ ಚೀಟಿ ತೋರಿಸಿ,ವಿಳಾಸ ಕೇಳುವಂತೆ ನಟಿಸಿದ್ದೊಂದೇ ಗೊತ್ತು, ಮತ್ತೆ ಮೈಮೇಲೆ ಎಚ್ಚರವೇ ಇಲ್ಲ. ಅರೆ ಮಂಪರಿನ ಎಚ್ಚರವಾದಾಗ ರೈಲಿನಲ್ಲಿ ಎಲ್ಲಿಗೋ ಪ್ರಯಾಣಿಸುತ್ತಿರುವುದು, ಮಧ್ಯರಾತ್ರಿ ಮೀರಿ ಹೋಗಿರುವುದು ತಾನು ಸೀಟಿನ ಕೆಳಗಡೆ ಮಲಗಿಸಲ್ಪಟ್ಟಿರುವುದು ಅವಳ ಗಮನಕ್ಕೆ ಬಂದಿದೆ. ನಿಧಾನಕ್ಕೆ ಎಚ್ಚೆತ್ತು ಸಹಪ್ರಯಾಣಿಕರ ಗಮನ ಸೆಳೆದು ಅವರು ಈ ಹುಡುಗಿಯನ್ನು ವಿಚಾರಿಸುತ್ತಿರುವಾಗಲೇ ಇವಳನ್ನು ಕದ್ದು ತಂದಿದ್ದ ಹೆಂಗಸು ರೈಲು ನಿಂತ ಮುಂದಿನ ಸ್ಟೇಷನ್‌ನಲ್ಲಿ ಇಳಿದು ಹೋಗಿದ್ದಾಳೆ. ಅಂತೂ ಹೇಗೋ ಈ ಹುಡುಗಿ ಮನೆ ಸೇರಿದಳಾದರೂ ಪೊಲೀಸ್‌ಗೆ ದೂರು ನೀಡಿದ್ದರೆ ಆ ಹೆಂಗಸು ಸಿಕ್ಕಿ ಹಾಕಿಕೊಳ್ಳಬಹುದಾದ, ಅವಳ ಹಿಂದೆ ಇರಬಹುದಾದ ಜಾಲವನ್ನು ಪತ್ತೆ ಹಚ್ಚುವ ಎಲ್ಲ ಸಾಧ್ಯತೆಗಳಿತ್ತು. ಆದರೆ ಬಾಲ ನ್ಯಾಯಮಂಡಳಿಗೆ ದೂರು ನೀಡಿ, ಅವರು ಅದನ್ನು ಗಂಭೀರವಾಗಿ ಪರಿಗಣಿಸದೇ ಕೆಲದಿನಗಳಲ್ಲೇ ಕೇಸನ್ನು ಮುಚ್ಚಿಹಾಕಿದರು. ಹಾಗಿದ್ದರೆ ನ್ಯಾಯ ಎಲ್ಲಿದೆ?

ಹಳ್ಳಿಯೊಂದರ 15 ವರ್ಷ ವಯಸ್ಸಿನ ಹುಡುಗಿಯನ್ನು ಬಲವಂತದಿಂದ ನಗರದ ಪ್ರತಿಷ್ಠಿತರೊಬ್ಬರ ಮನೆಯಲ್ಲಿ ಅಪ್ಪ ಮನೆಗೆಲಸಕ್ಕೆ ಸೇರಿಸಿದ್ದಾನೆ. ಆ ಮನೆಗೆ ಬಂದ ಬಂಧುವೊಬ್ಬ ಈ ಹುಡುಗಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದ ನೆಪ ಹೇಳಿ ತನ್ನೊಂದಿಗೆ ಕರೆದುಕೊಂಡು ಹೋಗಿ, ಕೇಳಿದವರಿಗೆ ಅವಳಿಗೆ ಬುದ್ಧಿ ಸರಿಯಿಲ್ಲವೆಂದು ನಾಟಕವಾಡಿ ಅವಳ ತೀವ್ರ ವಿರೋಧದ ನಡುವೆಯೂ ಗೆಳೆಯರೊಂದಿಗೆ ಸೇರಿ ದಿಲ್ಲಿಯ ವೇಶ್ಯಾವಾಟಿಕೆಯೊಂದಕ್ಕೆ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಬೇರೊಂದು ಪ್ರಕರಣದಲ್ಲಿ ಕಣ್ಮರೆಯಾದ ಹುಡುಗಿ ಯನ್ನು ಹುಡುಕುತ್ತಾ ದಿಲ್ಲಿಗೆ ಬಂದ ಕರ್ನಾಟಕ ಪೊಲೀಸರಿಗೆ ಇವಳೊಂದಿಗೆ ಇನ್ನೂ ನಾಲ್ವರು ಕಣ್ಮರೆಯಾದ ಹುಡುಗಿಯರೂ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ಸಿಕ್ಕಿ ಅವರನ್ನೂ ವಾಪಸ್ ಕರೆತಂದಿದ್ದಾರೆ. ತಾಯಿ ಮಾನಸಿಕ ಅಸ್ವಸ್ಥೆ, ತಂದೆ ಕಾಮುಕ ತನ್ನನ್ನು ಬಹಳಷ್ಟು ಬಾರಿ ಲೈಂಗಿಕವಾಗಿ ಹಿಂಸಿಸಿದ್ದಾನೆ, ತಾನು ಮನೆಗೆ ವಾಪಸಾಗುವುದಿಲ್ಲವೆಂದ ಹುಡುಗಿಗೆ, ಸರಕಾರಿ ಬಾಲಮಂದಿರದಲ್ಲಿ ಆಶ್ರಯ ದೊರೆತಿದೆ. ದಿಲ್ಲಿಯಿಂದ ಬರು ವಾಗಲೇ ಬಸಿರಾಗಿದ್ದ ಈ ಹುಡುಗಿಯ ಇಷ್ಟದಂತೆ ಗರ್ಭ ತೆಗೆಸಿ ಮುಂದಿನ ಓದಿಗೆ ಅನುಕೂಲ ಮಾಡಿಕೊಡಲಾಗಿದೆ. ಕದ್ದವರು, ಮಾರಾಟ ಮಾಡಿದವರು, ಇವಳನ್ನು ಉಪಯೋಗಿಸಿಕೊಂಡು ದಂಧೆ ನಡೆಸಿದವರು ನೆಮ್ಮದಿಯಾಗಿ ತಮ್ಮ ಕೆಲಸಗಳನ್ನು ಮುಂದುವರಿಸಿದ್ದಾರೆ! ಎಲ್ಲವೂ ಕನ್ನಡಿಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಗೋಚರಿಸುತ್ತಿದ್ದರೂ ತಪ್ಪಿತಸ್ಥರು ಸಿಕ್ಕಿಬಿದ್ದಿಲ್ಲ. ಶಿಕ್ಷೆಯೂ ಇಲ್ಲ. ಎಲ್ಲವೂ ಯಥಾಸ್ಥಿತಿ ಮುಂದುವರಿದಿದೆ. ಆದರೆ ಜೀವನಪರ್ಯಂತ ಓಡಿಹೋಗಿದ್ದವಳು, ವೇಶ್ಯಾವಾಟಿಕೆ ಮಾಡಿದವಳು, ಅವಿವಾ ಹಿತೆಯಾಗಿಯೂ ಬಸಿರಾದವಳೆಂಬ ಶಾಶ್ವತ ಹಣೆಪಟ್ಟಿ ಈ ಹುಡುಗಿಯ ಪಾಲಿಗೆ. ಅಪರಾಧಿಗಳು ಏಕೆ ಮತ್ತು ಹೇಗೆ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ?

ಹೋಮ್ ನರ್ಸ್ ಸೇವಾ ಸಂಸ್ಥೆಯೊಂದಕ್ಕೆ ತರಬೇತಿಗಾಗಿ ಸೇರಿದ ಓರ್ವ 20ರ ಹರೆಯದ ಯುವತಿ ತನ್ನ ಗೆಳತಿಯರ ಸಮೇತವಾಗಿ ಹೆಣ್ಣುಮಕ್ಕಳ ಅಕ್ರಮ ಮಾರಾಟ ಜಾಲಕ್ಕೆ ಸಿಕ್ಕಿ, ತಾನೊಬ್ಬಳು ಮಾತ್ರ ಹೇಗೋ ಅದರಿಂದ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದು ಅಲ್ಲಿಯೇ ಚಿಕ್ಕದೊಂದು ಕೆಲಸಕ್ಕೆ ಸೇರಿದ್ದಾಳೆ. ಸಮಾಜದ ಕುಹಕ ದೃಷ್ಟಿಯಿಂದ ನಿತ್ಯ ನರಕ ಅನುಭವಿಸುತ್ತಿದ್ದಾಳೆ. ಎಲ್ಲಿಹೋಗಿದ್ದಳೋ, ಏನೇನಾಗಿತ್ತೋ ಎಂಬ ಸಂಶಯದಿಂದ ಇವಳನ್ನು ಮದುವೆಯಾಗಲು ಯಾರೊ ಬ್ಬರೂ ಮುಂದೆ ಬಂದಿಲ್ಲ. ಈ ಪ್ರಕರಣ ಕುರಿತು ಪೊಲೀಸ್ ಕೇಸು ದಾಖಲಾಗಿದ್ದರೂ, ಮಾರಾಟ ಜಾಲದ ಯಾವ ಸುಳುಹುಗಳೂ ಸಿಗದೇ ಮುಚ್ಚಿಹೋಗಿದೆ. ತಪ್ಪು ಯಾರದ್ದು? ಯಾರಿಗೆ ಶಿಕ್ಷೆ?

ಹೆಂಗಳೆಯರು ನಾವಂತೂ, ನಮ್ಮದೇ ಹೆಣ್ಣು ಸಂಕುಲದ ದಾರುಣ ನೋವನ್ನು ನೋಡುವಾಗಲೆಲ್ಲಾ, ಸಂಕಟದಿಂದ ಅವರ ಮನೆ ಹೆಣ್ಣುಮಕ್ಕಳಿಗೇ ಹೀಗೆಲ್ಲ ಆಗಿದ್ದರೆ, ಹೀಗೇ ಸುಮ್ಮನೆ ಇರ್ತಿದ್ದರಾ? ಎಂದು ಪುರುಷ ಪ್ರಭುತ್ವಕ್ಕೆ ಮನಸಿನಾಳದಲ್ಲೇ ಶಾಪ ಹಾಕುತ್ತಿರುತ್ತೇವೆ! ಆದರೆ ತನ್ನದೇ ಅರ್ಧಭಾಗವಾಗಿರುವ ಹೆಣ್ಣುಜೀವದ ನೋವನ್ನು ಅರ್ಥಮಾಡಿಕೊಳ್ಳುವ, ಅದಕ್ಕಾಗಿ ತುಡಿಯುವ ಸಂವೇದನೆಯನ್ನು ನಮ್ಮ ಸುತ್ತಲಿನ ಪುರುಷ ಪ್ರಪಂಚ ರೂಢಿಸಿಕೊಳ್ಳಬಾರದೇ? ಇದು ಸದಾ ನಮ್ಮನ್ನು ಕಾಡುತ್ತಲೇ ಇದೆ.

ಹೆಣ್ಣುಜೀವದ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ಜೊತೆಗೇ ರಾಜ್ಯದಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಆತಂಕ ಹುಟ್ಟಿಸುವಷ್ಟು ಮಿತಿಮೀರಿದೆ. ಪ್ರತಿದಿನ ಪತ್ರಿಕೆಯ ಸ್ಥಳೀಯ ಪುಟಗಳಲ್ಲಿ ಒಂದಲ್ಲಾ ಒಂದು ಹೆಣ್ಣುಮಕ್ಕಳ ನಾಪತ್ತೆಗೆ ಸಂಬಂಧಿಸಿದ ಸುದ್ದಿ ಈಗ ಮಾಮೂಲಿಯಾಗಿಬಿಟ್ಟಿದೆ. ರಾಜ್ಯದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ 2009 ರಿಂದ 2011 ರವರೆಗೆ ದಾಖಲಾದ ನಾಪತ್ತೆಯಾದ ಹೆಣ್ಣುಮಕ್ಕಳು 14,989. ನಾವಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮರ್ಯಾದೆಗೆ ಅಂಜಿ ದಾಖಲಾಗದವು ಇದರ ದುಪ್ಪಟ್ಟೋ ಮೂರುಪಟ್ಟೋ ಇದ್ದರೂ ಅಚ್ಚರಿಪಡಬೇಕಿಲ್ಲ. ಆದರೆ ದಾಖಲಾದವುಗಳಲ್ಲೇ ಪತ್ತೆಯಾಗದೆ ಉಳಿದ ಹೆಣ್ಣುಮಕ್ಕಳು 8,039! ಜೊತೆಗೆ 2012ರಲ್ಲಿ ನಾಪತ್ತೆಯಾದವರು 8,084! ಇವರೆಲ್ಲಾ ಏನಾದರು? ಎಲ್ಲಿ ಹೋಗುತ್ತಾರೆ? ನಾಪತ್ತೆಯಾಗುವುದು ಎಂದರೆ ಏನು? ತಾವಾಗಿಯೇ ನಾಪತ್ತೆಯಾಗಿಬಿಡುತ್ತಾರೆಯೇ? ಅಥವಾ ಕಾಣದ ಕೈಗಳು ಅವರನ್ನು ನಾಪತ್ತೆ ಮಾಡಿಬಿಡುತ್ತವೆಯೇ? ಅವರನ್ನು ಕಾಳಜಿಯಿಂದ ಹುಡುಕುವ ಕೆಲಸವಾಗುತ್ತಿಲ್ಲ ಯಾಕೆ? ಈ ಪ್ರಮಾಣದಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರೂ ಅದು ನಮ್ಮ ವ್ಯವಸ್ಥೆಯ ಕರುಳನ್ನು ಅಳ್ಳಾಡಿಸುತ್ತಿಲ್ಲವೇಕೆ?

ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾರ್ಮಿಕ ಇಲಾಖೆ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಬಾಲ ನ್ಯಾಯ ಮಂಡಳಿ, ಮಹಿಳೆ ಮತ್ತು ಮಕ್ಕಳ ಪರ ಹಲವು ಸರಕಾರಿ ಆಯೋಗಗಳು, ಸಮಿತಿಗಳು ಇಂತಹ ಹತ್ತು ಹಲವು ವ್ಯವಸ್ಥೆಗಳು ಪ್ರಕರಣಗಳನ್ನು ನೇರವಾಗಿ ನಿರ್ವಹಿಸುತ್ತಿದ್ದರೂ ಹೆಣ್ಣುಮಕ್ಕಳ ನಾಪತ್ತೆ ನಿಯಂತ್ರಣಕ್ಕೆ ಬರದೇ ಅದಕ್ಕಾಗಿ ಪ್ರತ್ಯೇಕವಾದ ಯಾವ ಗಂಭೀರ ಕ್ರಮವನ್ನೂ, ಕಾರ್ಯಯೋಜನೆಯನ್ನೂ ತೆಗೆದುಕೊಳ್ಳುತ್ತಿಲ್ಲವೆಂದರೆ ಹೆಣ್ಣುಮಕ್ಕಳನ್ನು ರಕ್ಷಿಸುವವರಾರು?

ಮಹಿಳೆಯರ ಕಳ್ಳಸಾಗಾಟದ ಹಿಂದಿರುವ ಸತ್ಯಸಂಗತಿಗಳನ್ನು ಅರಿಯಲು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಡೆಸಿದ ಅಧ್ಯಯನದಿಂದ ಹಲವಾರು ಬೆಚ್ಚಿಬೀಳುವಂತಹ ಅಂಶಗಳು ಹೊರಬಿದ್ದಿವೆ. ಕಳ್ಳಸಾಗಾಟದ ಜಾಲಕ್ಕೆ ಸಿಕ್ಕಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟವರಲ್ಲಿ ಶೇಕಡಾ 60.6ರಷ್ಟು ಮಂದಿ ಬಾಲ್ಯವಿವಾಹವಾದವರೆ! ಕಳ್ಳಸಾಗಾಟದ ವ್ಯವಹಾರದಲ್ಲಿ ನಿರತರಾದ ದಲ್ಲಾಳಿಗಳು ಮಹಿಳೆಯರನ್ನು ಹೆಚ್ಚಾಗಿ ಒಳ್ಳೆಯ ಕೆಲಸದ ಭರವಸೆ ನೀಡಿಯೇ ಬಲಿಪಶು ಮಾಡುತ್ತಿದ್ದಾರೆ. ಪ್ರೀತಿ ಅಥವಾ ಮದುವೆಯ ಭರವಸೆ ನೀಡಿ ಈ ಜಾಲಕ್ಕೆ ಕೆಡಹುವುದು ಶೇಕಡಾ 20 ಮಾತ್ರ! ವಂಚನೆಗೊಳಗಾದವರಲ್ಲಿ ತಳವರ್ಗದವರೇ ಹೆಚ್ಚಿದ್ದು, ಶೇಕಡಾ 70 ರಷ್ಟು ಮಹಿಳೆಯರು ತಳಸಮುದಾಯದವರು!

ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣ ವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. 90ರ ದಶಕದಿಂದ ಎಲ್ಲಾ ಸರಕಾರಗಳು ಜಾರಿಗೊಳಿಸಿದ ಜಾಗತೀಕರಣದ ನೀತಿಗಳು ಮಹಿಳೆಯರ ಮತ್ತು ಮಕ್ಕಳ ಮಾರಾಟ ಅತಿ ಹೆಚ್ಚು ಬೆಳೆಯಲು ಕಾರಣ ವಾಗಿದೆ. 2010ರ ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ವರದಿಯಂತೆಯೇ ಸದ್ಯ 25 ಲಕ್ಷ ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ. ಆದರೆ ಮಾನವ ಹಕ್ಕುಗಳ ವಾಚ್‌ನ ವರದಿಯಂತೆ ಇದುವರೆಗೆ ಅಂದಾಜು 150 ಲಕ್ಷ (ಒಂದೂವರೆ ಕೋಟಿ) ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ! ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತಾರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ.

ನಾಪತ್ತೆಯಾದ ಹೆಣ್ಣುಮಕ್ಕಳು ವೇಶ್ಯಾ ವಾಟಿಕೆಯ ಅಡ್ಡೆಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಟ ಜಾಲವನ್ನು ಭೇದಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಲ್ಲವೂ ಗೊತ್ತಿದ್ದೂ ಹೆಣ್ಣುಮಕ್ಕಳನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚಾಲೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿದೆಯೇ? ಹೆಣ್ಣಿನ ದೇಹವನ್ನು ವಸ್ತುವನ್ನಾಗಿಸಿಕೊಂಡು ವ್ಯಾಪಾರದ ಆಟವಾಡುತ್ತಿರುವವರಿಗೆ ನಾಪತ್ತೆಯಾದ ಹೆಣ್ಣುಮಕ್ಕಳೇ ಬಂಡವಾಳ ಹೂಡಿಕೆಯಾಗಿ ಬಳಕೆಯಾಗುತ್ತಿದ್ದಾರೆ. ಅದರಿಂದ ಕೋಟಿಗಟ್ಟಲೆ ಆದಾಯ ದೊರಕುತ್ತಿದೆ!
ಇದು ಕೇವಲ ಮಹಿಳಾ ಹಕ್ಕಿನ ವಿಷಯವಲ್ಲ, ಮನುಷ್ಯತ್ವದ ಕಟ್ಟಕಡೆಯ ಮಜಲು ಎಂದು ಸರಕಾರಕ್ಕೆ ಹೃದಯ ದ್ರವಿಸುವಂತೆ ಹೇಗೆ ಅರ್ಥಮಾಡಿಸುವುದು?

ಕಳೆದ 2012ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ 200-300 ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 70ರಷ್ಟು ಇನ್ನೂ ಬಾಲ್ಯದಾಟದವರು ಎನ್ನುವುದು ಆತಂಕಕಾರಿಯಾಗಿದೆ. ರಾಜ್ಯ ಮಹಿಳಾ ಆಯೋಗವೂ ಕಳೆದ ವರ್ಷ ಈ ವರದಿಯನ್ನಾಧರಿಸಿ- ಶೇಕಡಾ 36ರಷ್ಟು ಹೆಣ್ಣುಮಕ್ಕಳು ಪ್ರೀತಿ, ಪ್ರೇಮ ಪ್ರಕರಣಗಳಿಗಾಗಿ ಓಡಿ ಹೋಗುತ್ತಾರೆ ಎಂದು ಒತ್ತಿ ಹೇಳಿದೆ. ಹಾಗಿದ್ದರೆ ಅವರೊಂದಿಗೆ ಇಷ್ಟೇ ಪ್ರಮಾಣದ ವಯಸ್ಕ ಪುರುಷರೂ ನಾಪತ್ತೆಯಾಗಬೇಕಿತ್ತಲ್ಲ? ಈ ಬಗ್ಗೆ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ದಾಖ ಲಾದ ಪ್ರಕರಣಗಳನ್ನು ಅಭ್ಯಸಿಸಿದಾಗ ಹಾಗೆ ನಾಪತ್ತೆಯಾದ ಪುರುಷರ ಪ್ರಮಾಣ ಶೇಕಡಾ 5ರೊಳಗೇ ಇದೆ! ಇದರಲ್ಲೂ ಪ್ರೀತಿ ಪ್ರೇಮಕ್ಕಿಂತ ಬೇರೆ ವೈಯಕ್ತಿಕ ಕಾರಣಗಳೇ ಮುಖ್ಯವಾಗಿವೆ. ಹಾಗಿದ್ದರೆ ನಮ್ಮ ಹೆಣ್ಣುಮಕ್ಕಳು ಯಾರನ್ನು ಪ್ರೀತಿಸಿ ಓಡಿ ಹೋಗುತ್ತಿದ್ದಾರೆ? ನಮ್ಮ ಹೆಣ್ಣುಮಕ್ಕಳೇನು ಮೀರಾ, ಅಕ್ಕಮಹಾದೇವಿ, ಆಂಡಾಳ್‌ರಂತೆ ಸಂತಭಕ್ತೆಯರೇ? ಇದು ಏನನ್ನು ಸೂಚಿಸುತ್ತದೇ? ಹೆಣ್ಣುಮಕ್ಕಳ ವ್ಯವಸ್ಥಿತವಾದ ಮಾರಾಟ ಜಾಲವನ್ನು ನಿಗೂಢ ಕೈಗಳು ವ್ಯವಸ್ಥಿತವಾಗಿ ನಿರಾತಂಕವಾಗಿ ನಡೆಸುತ್ತಿವೆ ಎಂದಲ್ಲವೇ? ಪ್ರೀತಿಸಿ ಮನೆ ಬಿಟ್ಟು ಹೋಗುತ್ತಿರುವ ಹೆಣ್ಣುಮಕ್ಕಳು ಇಲ್ಲವೇ ಇಲ್ಲವೆಂದಲ್ಲ. ಆದರೆ ಪ್ರೀತಿಯ ಹಿಂದೆ ಬಿದ್ದು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದರೆ ಅವರನ್ನು ಪತ್ತೆ ಹಚ್ಚುವುದು ಕಷ್ಟವಾದರೂ ಸಾಧ್ಯ. ಆದ್ದರಿಂದ ಹೆಣ್ಣುಮಕ್ಕಳು ಶಾಶ್ವತವಾಗಿ ಕಾಣೆಯಾಗುವುದರ ಹಿಂದೆ ಮೋಸದ ಮಾಯಾ ಜಾಲ ಹರಡಿ ನಿಂತಿರುತ್ತದೆ ಎಂಬುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರಲ್ಲವೇ?

ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆಯೆಂಬ ಕ್ರೂರ ವ್ಯವಹಾರ ನಿಯಂತ್ರಣಕ್ಕೆ ಇನ್ನಾದರೂ ಸರಕಾರದ ಉನ್ನತ ಹಂತದಲ್ಲಿ ಸಮಗ್ರವಾದ ಕಾರ್ಯಯೋಜನೆ ಅತ್ಯಂತ ತುರ್ತಾಗಿ ಆಗಬೇಕಿದೆ. ಇದಕ್ಕೆ ಸಂಬಂಧಿತವಾದ ಎಲ್ಲಾ ಇಲಾಖೆಗಳು, ಸರಕಾರಿ ಸಮಿತಿಗಳೂ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಂಘಟಿತವಾಗಿ, ಪರಸ್ಪರ ಪೂರಕವಾಗಿ ಈ ಕೆಲಸದಲ್ಲಿ ತೊಡಗಿಕೊಳ್ಳಬೇಕಿದೆ. ಈ ವಿಷಯದ ಗಂಭೀರತೆಗೆ ತಕ್ಕ ಸಶಕ್ತವಾದ ಕಾನೂನುಗಳು ಇಲ್ಲದಿರುವುದು, ಇದ್ದರೂ ಅದರೊಳಗಿನ ನುಸುಳುಗಳು, ಜತೆಗೆ ನ್ಯಾಯದಾನದ ವಿಳಂಬ ಹಾಗೂ ಕಾನೂನು ಜಾರಿಯಲ್ಲೂ ವಿಳಂಬ, ಹೀಗಾಗಿ ಈ ಅಕ್ರಮ ವ್ಯವಹಾರ ಎಗ್ಗಿಲ್ಲದೇ ನಡೆಯುತ್ತಿವೆ. ಅದಕ್ಕಾಗಿ ತ್ವರಿತಗತಿಯ ನ್ಯಾಯಾಲಯಗಳಲ್ಲಿ ತಕ್ಷಣವೇ ನ್ಯಾಯ ನೀಡುವ ವ್ಯವಸ್ಥೆಯಾಗಬೇಕು. ಜೊತೆಗೇ ಇಂದಿನ ಆವಶ್ಯಕತೆಗನುಗುಣವಾಗಿ ಕಾನೂನು ತಿದ್ದುಪಡಿಯೂ ಆಗಬೇಕಿದೆ.

 30 ಮೇ 2005 ರಲ್ಲಿ ಕರ್ನಾಟಕ ಸರಕಾರದಿಂದ, ಪ್ರತಿ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತ್‌ಗಳಲ್ಲಿ ಹೆಣ್ಣುಮಕ್ಕಳ ಮಾರಾಟ ತಡೆ ಸಮಿತಿಗಳನ್ನು ರಚಿಸಲು ಆದೇಶ ಜಾರಿಯಾಯ್ತು. ಅದು ಯಶಸ್ವಿಯಾಗಿ ಜಾರಿಯಾಗಲಿಲ್ಲವೆಂದು ಮತ್ತೆ 28 ಮೇ 2007ರಲ್ಲಿ, ಚುನಾಯಿತ ಪ್ರತಿನಿಧಿಗಳ ಮುಖಂಡತ್ವದಲ್ಲಿ ಈ ಸಮಿತಿಗಳನ್ನು ಪುನರ್ ರಚಿಸಬೇಕೆಂಬ ಆದೇಶ ಜಾರಿಯಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಸಮಿತಿಯು ಸಭೆ ಸೇರಿ ಕಾರ್ಯಯೋಜನೆಯ ಸಿದ್ಧತೆ ಹಾಗೂ ಆದ ಕೆಲಸಗಳ ಪರಾಮರ್ಶೆ ಮಾಡಬೇಕೆಂದು ಆದೇಶದಲ್ಲಿ ಒತ್ತಿಹೇಳಲಾಗಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಇಂತಹ ಸಮಿತಿ ರೂಪುಗೊಂಡಿಲ್ಲ. ರೂಪುಗೊಂಡ ಸಮಿತಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬುದು ದುಃಖಕರ. ಈ ಸಮಿತಿಯ 10 ಜನ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಡ್ಡಾಯವಾಗಿ ಒಬ್ಬ ಪೊಲೀಸ್ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೆ 10 ಜನ ಜವಾಬ್ದಾರಿ ಯುತ ಸಾರ್ವಜನಿಕ ರನ್ನೊಳಗೊಂಡು 5 ಮಂದಿ ಪುರುಷರು, 5 ಮಂದಿ ಮಹಿಳೆಯರು ಮೂಲಮಟ್ಟದಲ್ಲಿ ಪುನರ್ ರಚಿತವಾಗಬೇಕು. ಈ ಕಣ್ಗಾವಲು ಸಮಿತಿ ಕನಿಷ್ಠ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಾರ್ವಜನಿ ಕರನ್ನೊಳಗೊಂಡಾಗ ಮಾತ್ರ ಸಮಿತಿ ನಿಗದಿತವಾಗಿ ಸೇರಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆಯಲ್ಲೇ ಇಂತಹ ನಾಪತ್ತೆ ಪ್ರಕರಣಗಳನ್ನು ಶೀಘ್ರವಾಗಿ ವ್ಯವಹರಿಸಲು ಪ್ರತ್ಯೇಕ ಸೆಲ್ ಒಂದನ್ನು ರಚಿಸುವ ತುರ್ತು ಕೂಡ ಹೆಚ್ಚಾಗಿದೆ. ಈ ಕುರಿತು ಸರಕಾರದ ಉನ್ನತಮಟ್ಟದಲ್ಲಿ ಕಾರ್ಯಯೋಜನೆಯೊಂದು ರೂಪುಗೊಂಡು, ಅದರ ಅನುಷ್ಠಾನಕ್ಕಾಗಿ ಬಿಗಿ ಕ್ರಮಗಳನ್ನು ಜಾರಿಗೊಳಿಸಬೇಕು.
ಇದರ ಜೊತೆಗೇ ಹದಿಹರೆಯದ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಲೈಂಗಿಕ ಶಿಕ್ಷಣ ಮತ್ತು ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಜೀವನ ಕೌಶಲ್ಯಗಳ ಕುರಿತು ತರಬೇತಿ, ಮಾನವ ಕಳ್ಳಸಾಗಾಟದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಅಷ್ಟೇ ಮುಖ್ಯವಾಗಿದೆ.

ನಾಪತ್ತೆಯಾಗಿ ಮತ್ತೆ ಪತ್ತೆಯಾದ ಹೆಣ್ಣುಮಕ್ಕಳಿಗೆ ಗೌರವಯುತ ಪುನರ್ವಸತಿ ನಿರ್ಮಿಸುವ ಕುರಿತು, ಅವರ ಸಹಜ ಹಕ್ಕುಗಳನ್ನು ದೊರಕಿಸಿಕೊಡುವ ಕುರಿತು ಸರಕಾರ ವಿಶೇಷವಾಗಿಯೇ ಯೋಚಿಸಬೇಕಿದೆ. ಅವರು ಮತ್ತೆ ಇಂತಹ ಅಕ್ರಮ ಮಾರಾಟ ಜಾಲಕ್ಕೆ ಬೀಳದಂತೆ ತಡೆಯುವ ಪ್ರಯತ್ನಗಳೂ ಆಗಬೇಕಿದೆ. ವಾಪಸಾದ ಹೆಣ್ಣುಮಕ್ಕಳು ಹೇಗೆ ನಾಪತ್ತೆಯಾದರು? ಇಷ್ಟು ಕಾಲ ಎಲ್ಲಿದ್ದರು? ಯಾವ ಕೆಲಸದಲ್ಲಿದ್ದರು? ಅಲ್ಲಿನ ವ್ಯವಸ್ಥೆ ಮತ್ತು ವ್ಯವಹಾರಗಳು ಯಾವ ರೀತಿಯದಾಗಿತ್ತು ಎಂಬುದರ ಕೂಲಂಕಷ ಸಮೀಕ್ಷೆಗಳಾಗಿ ಅದರ ಆಧಾರದ ಮೇಲೆ ಕಾರ್ಯಯೋಜನೆಯನ್ನು ಸಿದ್ಧಗೊಳಿಸಬೇಕು. ಇಂತಹ ಸಮೀಕ್ಷೆಯಿಂದ ಮಾತ್ರ ನಾಪತ್ತೆಯ ಹಿಂದಿರುವ ವೈಯಕ್ತಿಕ ಕಾರಣಗಳು, ಕೌಟುಂಬಿಕ, ಆರ್ಥಿಕ, ಸಾಮಾಜಿಕ ಕಾರಣಗಳು ಪತ್ತೆಯಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಲು ಹಾಗೂ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತವೆ. ಇಲ್ಲಿ ನಮಗೆ ಬೇಕಾಗಿರುವುದು, ಬೇಡುತ್ತಿರುವುದು-ನಮ್ಮ ಮನೆಯ ಹೆಣ್ಣುಮಗಳೇ ನಾಪತ್ತೆಯಾಗಿದ್ದರೆ.. ಎಷ್ಟು ತೀವ್ರವಾಗಿ ಸ್ಪಂದಿಸುತ್ತಿದ್ದೆವೋ, ಅಂತಹುದೇ ತೀವ್ರತೆಯನ್ನು ಪ್ರಭುತ್ವದಿಂದಲೂ, ಆಡಳಿತಶಾಹಿಯಿಂದಲೂ ನಾವು ನಿರೀಕ್ಷಿಸಬಹುದೇ?
ರೂಪ ಹಾಸನ
ಸೌಜನ್ಯ : ವಾರ್ತಾಭಾರತಿ 

Friday 18 July 2014

ಅತ್ಯಾಚಾರಗಳು ಆತಂಕವನ್ನು ಮೂಡಿಸುತ್ತಿವೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಪ್ರಕರಣಗಳನ್ನು ಗಮನಿಸಿದರೆ, ನಾವುಗಳು ಎಂತಹ ಅನಾಗರೀಕತೆ ಎಡೆಗೆ ಹೋಗುತ್ತಿದ್ದೇವೆಂದು ಅನಿಸುತ್ತಿದೆ. ಇಷ್ಟು ಮಾತ್ರವಲ್ಲದೆ, ಅತ್ಯಾಚಾರವನ್ನು ಮಾಡಿದ ಅನಾಗರೀಕರ ಕ್ರೋರ ಮನಸ್ಥಿತಿಯ ಬಗ್ಗೆ ಸಿಟ್ಟು ಬರುವ ಜೊತೆಗೆ ಅವರನ್ನು ಅಂತಹ ಸ್ಥಿತಿಗೆ ತಳ್ಳಿದ ಇಂದಿನ ಮಾಧ್ಯಮಗಳು (ನಿರಂತರವಾಗಿ ಟಿ.ಆರ್.ಪಿ ಗಾಗಿ ಹೆಚ್ಚೆಚ್ಚು ಸೆಕ್ಸ್ ಮತ್ತು ಕ್ರೈಮ ವಿಚಾರಗಳನ್ನೇ ತೋರಿಸುತ್ತಾರೆ) ಸಿನೇಮಾ, ನಮ್ಮ ಶಿಕ್ಷಣದ ವ್ಯವಸ್ಥೆ ಮತ್ತು ನಮ್ಮ ಸುತ್ತ ಮುತ್ತಲಿರುವ ಪರಿಸರುವೂ ಮುಖ್ಯ ಕಾರಣ ಎಂದೆನಿಸುತ್ತದೆ.  ಹಾಗಾಗಿ ಅತ್ಯಾಚಾರದ ವಿರುದ್ದ ಮಾತನಾಡುವಾಗ ತಪಿತಸ್ಥರಿಗೆ ಕಠಿಣ ಶಿಕ್ಷೆ ಯಾಗುವಂತೆ ಕಾನೂನು ಜಾರಿಗೆ ಬರ ಬೇಕೆಂದು ಒತ್ತಾಯಿಸುವಾಗಲೇ ಒಟ್ಟು ವಾತಾವರಣವನ್ನು ಬದಲಾಯಿಸುವ ಆಮೂಲಕ ಇಂತಹ ವಿಕೃತ ಮನಸ್ಥಿತಿಯಿಂದ ಇಂದಿನ ಯುವಜನರನ್ನು ಹೊರತರದಿದ್ದರೆ ಇಂತಹ ಘಟನೆಗಳಿಗೆ ಅಂತ್ಯವೇ ಇರುವುದಿಲ್ಲ. 

Sunday 13 July 2014

ಪಟೇಲರ ಹೆಸರಿನಲ್ಲೇ ಕೊಡಿ ಬಾಭಾ.

ಪ್ರಸ್ತುತ ಬಜೆಟ್ ನಲ್ಲಿ ಪಟೇಲರ ಪ್ರತಿಮೆಗೆ 200 ಕೋಟಿ ರೂ ಆದರೆ ದೇಶದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ 100 ಕೋಟಿ ರೂ. ಇದನ್ನು ನೋಡಿದರೆ ನಿಮಗೆ ಏನನಿಸುತ್ತದೆ?

Sunday 1 July 2012

ಪಿ.ಸಾಯಿನಾಥ್ ಬೆಂಗಳೂರಿಗೆ ಬಂದಿದ್ದಾಗ

ಜುಲೈ 1 ಪತ್ರಕರ್ತರ ದಿನಾಚರಣೆ ಅಂದು ಭಾರತದ ಪತ್ರಿಕಾ ರಂಗದ ದಿಕ್ಕನ್ನು ಬದಲಾಯಿಸಿದ, ಪತ್ರಿಕೋಧ್ಯಮಕ್ಕೆ ಹೊಸ ಭಾಶ್ಯೆ ಬರೆದ ಪಿ.ಸಾಯಿನಾಥ್ ರವರು ಬೆಂಗಳೂರಿಗೆ ಬಂದಿದ್ದರು. ಅವರು ಇಂಗ್ಲೀಷ್ ನಲ್ಲಿ ಬರೆದಿರುವ 'ಎವರಿ ಬಡಿ ಲವ್ಸ್ ದಿ ಡ್ರಾಟ್' ಪುಸ್ತಕವನ್ನು ಸೃಜನಶೀಲ ಬರಹಗಾರರಾದ ಜಿ.ಎನ್.ಮೋಹನ್ ಕನ್ನಡಕ್ಕೆ ಅನುವಾದಿಸಿದ್ದ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಪುಸ್ತಕ ಬೆಂಗಳೂರಿನ ಗಾಂಧಿ ಭವನದಲ್ಲಿ ಕಿಕ್ಕಿರಿ ಅಭಿಮಾನಿಗಳ ನಡುವೆ ಅಭನವ ಪ್ರಕಾಶನ ಬಿಡುಗೊಡೆಗೊಳಿತು. ಪುಸ್ತಕವನ್ನು ಬಿಡುಗಡೆಮಾಡಿದ ನಂತರ ಪಿ.ಸಾಯಿನಾಥ್ ರವರ ಕುರಿತಾದ 'ನ್ಯೂರೋ ಗೆಸ್ಟ್' ಸಾಕ್ಷಚಿತ್ರ ಪ್ರದರ್ಶನವಾಯಿತು. ಈ ಸಾಕ್ಷ ಚಿತ್ರವನ್ನು ನೋಡಿದಮೇಲಂತೂ ಪಿ.ಸಾಯಿನಾಥ್ ರ ಕೆಲಸದ ವೈಕರಿ ಅವರು ಬೆಳೆದು ಬಂದ ರೀತಿ ಮತ್ತು ದೇಶದ ದುಡಿಯುವ ವರ್ಗದ ಮೇಲೆ ಅದರಲ್ಲೂ ರೈತ ಸಮುದಾಯದ ಮೇಲೆ ಅವರಿಟ್ಟಿರುವ ಅಪಾರ ಶ್ರದ್ದೆ, ತಮ್ಮ ಬರಹಗಳ ಮೂಲಕ ರೈತ ಸಮುದಾಯದ ನೈಜ ಸಮಸ್ಯೆಗಳನ್ನು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಪತ್ರಿಕೆಗಳಿಗೆ ಬರೆಯುತ್ತಲೇ ಅವರು ಬೆಳದರು, ಆಮೂಲಕ ಆಳುವ ಸರ್ಕಾರಗಳ ಬೇಜವಾಭ್ದಾರಿತನವನ್ನು ಬಯಲಿಗೆಳೆಯುತ್ತ ಜವಾಭ್ದಾರಿಗಳ ಬಗ್ಗೆ ಎಚ್ಚರಿಸಿಕೊಂಡು ಭಾರತದ ಪತ್ರಿಕೋಧ್ಯಮದಲ್ಲೇ ಒಂದು ವಿಭಿನ್ನ ದೃಷ್ಟಿಕೋನವನ್ನು ಕೊಡುವ ಮೂಲಕ ಯು ಪತ್ರಕರ್ತರನ್ನು ಗ್ರಾಮೀಣ ಬಡ ಜನರ ಬಳಿಗೆ ಸೆಳೆದವರು ಪಿ.ಸಾಯಿನಾಥ್. 
ಇವರು ಮಾತನಾಡುತ್ತಾ ಜಾಗತೀಕರಣದ ಪರಿಣಾಮವಾಗಿ ಮಾಧ್ಯಮ ಉಧ್ಯಮವಾಗಿ ಬದಲಾಗಿದೆ, ಅಲ್ಲಿ ಎಲ್ಲರಿಗೂ ಲಾಭ ಮಾಡುವ ಉದ್ದೇಶ ಬಿಟ್ಟರೆ  ಜನರ ಸಮಸ್ಯೆಗಳನ್ನು ಕುರಿತು ವರದಿಗಳನ್ನು ಮಾಡುವ ಯಾವ ಉದ್ದೇಶವೂ ಇಲ್ಲ. ಅದಕ್ಕಾಗಿಯೇ ದೇಶದ ಯಾವುದೇ ದೃಶ್ಯಮಾಧ್ಯಮವಾಗಲೀ ಅಥವಾ ಮುದ್ರಣ ಮಾಧ್ಯಮವಾಗಲೀ ಕೃಷಿ, ನಿರುದ್ಯೋಗದಂತಹ ವಿಷಯಗಳನ್ನು ಒರತುಪಡಿಸಿ ಎಲ್ಲಾ ವಿಚಾರಗಳಗೂ ಪ್ರತ್ತೇಕ ವರದಿಗಾರರನ್ನು ನೇಮಿಸಿರುತ್ತಾರೆ ಎಂದರು.
ನನಗೆ ಪಿ.ಸಾಯುನಾಥ್ ತುಂಬ ಇಷ್ಟವಾಗುವುದು ಅವರು ಯಾವುದೇ ಒಂದು ಸಮಸ್ಯೆಯನ್ನು ನೋಡುವ ರೀತಿ ಮತ್ತು ಅದರ ಮೂಲಕ ಸಮಸ್ಯೆಯ ಆಳಕ್ಕಿಳಿದು ಅದನ್ನು ಪ್ರತ್ಯಕ್ಷವಾಗಿ ಕಂಡು ಅದನ್ನು ಧಾಖಲಿಸುವ ವಿಧಾನ ಮತ್ತು ಅವರು ಸಮಾಜದ ಎರಡು ತುದಿಗಳಲ್ಲಿ ನಡೆದಿರುವ ಘಟನೆಗಳನ್ನು ಆದರಿಸಿ ಅವುಗಳ ವೈರುಧ್ಯವನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ ಉದಾಹರಣೆಗೆ ಅವರು ಯಾವಾಗಳೂ ಮಾತನಾಡುವಹಾಗೆ ಮಹಾರಷ್ಟ್ರದ ರಾಜಧಾನಿ ಬಾಂಬೆಯಲ್ಲಿ ಕಾಟನ್ ಬಟ್ಟೆ ಕುರಿತು ಲ್ಯಾಕ್ಮಿ ಕಂಪನಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಅದನ್ನು ವರದಿಮಾಡಲೆಂದು ದೇಶ-ವಿದೇಶಗಳಿಂದ 200 ಕ್ಕೂ ಹೆಚ್ಚು ಪತ್ರಕರ್ತರು, ಚಾಯಾಚಿತ್ರಗಾರರು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದರು. ಆದರೆ ಅದೇ ರಾಜ್ಯದ ಫ್ಯಾಶನ್ ಶೋ ನಡೆಯುವ 300 ಕಿ.ಮಿ ದೂರದಲ್ಲಿ ರುವ ವಿದರ್ಬಾದಲ್ಲಿ ರೈತರು ಅತ್ತಿ ಬೆಳೆದು ಬೆಲೆಸಿಗದೆ ಸಾಲಮಾಡಿ ಆತ್ಮಹತ್ಯೆಮಾಡಿಕೊಂಡಿದ್ದರೆ ಅದನ್ನು ವರದಿಮಾಡಲು ಕೇವಲ 5 ಜನ ಪತ್ರಕರ್ತರಿದ್ದರಂತೆ. ಅಂದರೆ ಭಾರತದ ಪತ್ರಿಕೋಧ್ಯಮದ ಆಧ್ಯತೆ ಏನೆಂದು ಕೊತ್ತಾತಿತ್ತಲ್ಲ. ಇದನ್ನು ಸಮಾಜದ ಮುಂದೆ ಅಂಕಿಸಂಖ್ಯೆ ಸಮೇತ ಸಾದರಪಡಿಸುವುದರಲ್ಲಿ ಸಾಯಿನಾಥ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸಮಾಜವಾದದ ಕತೆ ಮುಗಿಯಲಿಲ್ಲ, ಹೊಸದಾಗಿ ಆರಂಭವಾಗಿದೆ


ರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ವಿಘಟನೆ ಹೊಂದಿದಾಗ ನಮಗೆಲ್ಲ ದೊಡ್ಡ ಆಘಾತವೇ ಆಗಿತ್ತು- ಮಾನವ ಇತಿಹಾಸದಲ್ಲಿ, ಸಮಾನತೆಗಾಗಿ ಹೋರಾಟದಲ್ಲಿ ಹೊಸ ಅಧ್ಯಾಯವನ್ನು ತೆರೆದ ದೇಶವೊಂದು ಹೀಗೇಕೆ ಕಣ್ಮರೆಯಾಯಿತು ಎಂಬ ಆಘಾತ ಮಾತ್ರವಲ್ಲ ಅದು- ಮಾನವನಿಂದ ಮಾನವನ ಶೋಷಣೆಯಿಲ್ಲದ ಸಮಾಜದ ಕನಸು ಕಟ್ಟಿ ಕೊಟ್ಟ ಸಮಾಜವಾದವೆಂಬ ಪರಿಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯುವಂತದ್ದೇ ಎಂಬ ಯಕ್ಷಪ್ರಶ್ನೆ  ಎದುರಾದ ಆಘಾತ ಅದು. ಆದರೆ ಇದು ಬಹಳ ಕಾಲ ಯಕ್ಷಪ್ರಶ್ನೆಯಾಗಿ ಉಳಿಯಲಿಲ್ಲ. ಮಾನವನ ಇತಿಹಾಸದಲ್ಲಿ ಎರಡು ದಶಕಗಳು ಎಂಬುದು ಬಹಳ ಸಣ್ಣ ಅವಧಿ  ತಾನೇ?
ಈ ಎರಡು ದಶಕಗಳಲ್ಲಿ ವೋಲ್ಗಾ, ಮಿಸಿಸಿಪಿಗಳಲ್ಲಿ, ಲ್ಯಾಟಿನ್ ಅಮೆರಿಕಾದ ಅಮೆಝೊನ್ ನದಿಯಲ್ಲಿ, ಈಜಿಪ್ಟಿನ ನೈಲ್ ನದಿಯಲ್ಲೂ, ನಂತರ ಯುರೋಪಿನ ರೈನ್, ಸೆನ್, ಥೇಮ್ಸ್ಗಳಲ್ಲೂ, ನಮ್ಮ ಕಾವೇರಿ-ಗಂಗೆಯಂತೆ ಬಹಳಷ್ಟು ನೀರು ಹರಿದು ಹೋಗಿದೆ. ಸಮಾಜವಾದ ಸತ್ತಿತು, ಇತಿಹಾಸ ಕೊನೆಗೊಂಡಿತು, ಬಂಡವಾಳ ವ್ಯವಸ್ಥೆಯೇ ಮಾನವ ಕುಲದ ಅಂತಿಮ ನಿಯತಿ ಎಂಬ ಆಡಂಬರದ ಮಾತುಗಳೆಲ್ಲ ಈ ಅಲ್ಪ ಅವಧಿಯಲ್ಲೆ ಇತಿಹಾಸದ ಕಸದ ಬುಟ್ಟಿ ಸೇರಿವೆ. ಇದು ದುರಾಸೆಯ ವ್ಯವಸ್ಥೆ, ಈ ವ್ಯವಸ್ಥೆಯೇ ದೋಷಯುಕ್ತ, ಅಮಾನವೀಯ, ಈ ವ್ಯವಸ್ಥೆ ಕೊನೆಗೊಳ್ಳದೆ ಮಾನವ ಕುಲಕ್ಕೆ ಮುಕ್ತಿಯಿಲ್ಲ ಎಂಬ ಘೋಷಣೆಗಳು ಮತ್ತೆ, ದ್ವಿಗುಣ ಉತ್ಸಾಹದಿಂದ ಕೇಳಿ ಬರಲಾರಂಭಿಸಿವೆ. ಈ ವ್ಯವಸ್ಥೆಯ ಪ್ರತೀಕವಾದ ವಾಲ್ ಸ್ಟ್ರೀಟ್ಅನ್ನೇ ಆಕ್ರಮಿಸಿಕೊಳ್ಳಿ, ಏಕೆಂದರೆ ಇದು 1% ಮಂದಿಗಾಗಿ ಇರುವಂತದ್ದು, ನಾವು 99% ಎಂಬ ಸ್ವತಃ ಅಮೆರಿಕಾದ ಜನತೆಯ ಕೂಗಿಗೆ ಈಗ ಇಡೀ ವಿಶ್ವವೇ ಸ್ಪಂದಿಸಲಾರಂಭಿಸಿದೆ.  

ಲ್ಯಾಟಿನ್ ಅಮೆರಿಕಾದ ಸವಾಲು
ಸೋವಿಯೆತ್ ಒಕ್ಕೂಟದ ಕುಸಿದ ಮೇಲೆ ಇನ್ನು ಮುಂದೆ ತಾನೇ ಜಗತ್ತಿನ ಏಕೈಕ ಸೂಪರ್ ಪವರ್ ಎಂದು ಅಮೆರಿಕನ್ ಆಳರಸರು ಮತ್ತು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಕುಣಿದಾಡಿಕೊಂಡು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜಾಗತೀಕರಣದ ಹೆಸರಿನಲ್ಲಿ ಕುಪ್ಪಳಿಸುತ್ತಿದ್ದಾಗ, ಇದಕ್ಕೆ ಮೊದಲು ಸಡ್ಡು ಹೊಡೆದು ನಿಂತದ್ದು ಅದುವರೆಗೆ ಅಮೆರಿಕಾ ತನ್ನ ಹಿತ್ತಿಲು ಎಂದು ಭಾವಿಸಿದ್ದ ಲ್ಯಾಟಿನ್ ಅಮೆರಿಕಾ. ತನ್ನ ಹುಟ್ಟಿನಿಂದಲೇ ಅಮೆರಿಕಾದ ಯಜಮಾನಿಕೆಗೆ ಏಕಾಂಗಿಯಾಗಿ ಸವಾಲು ಹಾಕುತ್ತಾ ಬಂದಿದ್ದ ಪುಟ್ಟ ಕ್ಯೂಬಾದಿಂದ ಸ್ಫೂರ್ತಿ ಪಡೆದ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಒಂದೊಂದಾಗಿ ಸಮಾಜವಾದಿ-ಒಲವಿನ ಸರಕಾರಗಳು ಅಧಿಕಾರಕ್ಕೆ ಬರಲಾರಂಭಿಸಿದವು. 

ಬಂಡವಾಳವೇ ಸರ್ವಶಕ್ತ, ಅದನ್ನು ಸಂತುಷ್ಟಗೊಳಿಸಿದರೆ ಎಲ್ಲವೂ ಸರಿಯಾಗುತ್ತದೆ, ಜನಸಾಮಾನ್ಯರಿಗೂ ಅದರ ಪ್ರಯೋಜನ ಇಳಿದು ಬರುತ್ತದೆ ಎಂದು ಪ್ರತಿಪಾದಿಸುವ ನವ-ಉದಾರವಾದ ಎಂಬ ಧೋರಣೆ ಸೋವಿಯೆತ್ ಒಕ್ಕೂಟದ ಪತನದ ನಂತರ ಉಳಿದಿರುವ ಏಕಮಾತ್ರ ಮಾರ್ಗ ಎಂದು ಭಾರತವೂ ಸೇರಿದಂತೆ ಹಲವಾರು ದೇಶಗಳ ಆಳುವ ಮಂದಿ ಈಗ ಅನುಸರಿಸುತ್ತಿರುವ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪ್ರತಿಪಾದಿಸುತ್ತಿರುವ ಆಥರ್ಿಕ ಧೋರಣೆಗಳು ವಾಸ್ತವವಾಗಿ ಸಾಮ್ರಾಜ್ಯಶಾಹಿ ಜಾಗತೀಕರಣದ ಧೋರಣೆಗಳು, ಅವು ಈ ದೇಶಗಳ ಶ್ರೀಮಂತರ ಲಾಭದಾಹಗಳನ್ನು ತಣಿಸಬಹುದೇ ಹೊರತು, ಜನಸಾಮಾನ್ಯರ ಬದುಕನ್ನು ಹಸನು ಮಾಡಲಾರವು, ಬದಲಿಗೆ ಅದನ್ನು ಮತ್ತಷ್ಟು ಸಂಕಟಮಯಗೊಳಿಸುತ್ತವೆ ಎಂದು ಈ ದೇಶಗಳ ಜನರು ತಮ್ಮ ಸ್ವಂತ ಅನುಭವಗಳಿಂದ ಅರಿಯುತ್ತಿರುವಾಗಲೇ, ಅದಕ್ಕೆ ಜನಪರವಾದ ಪಯರ್ಾಯ ಅಭಿವೃದ್ಧಿ ಮಾರ್ಗ ಇದೆ ಎಂದು ಲ್ಯಾಟಿನ್ ಅಮೆರಿಕಾದ ದೇಶಗಳು ತೋರಿಸಿ ಕೊಡುತ್ತಿವೆ. 

ಇನ್ನೊಂದೆಡೆ 2008ರಲ್ಲಿ ಅಮೆರಿಕಾ ಮತ್ತು ಇತರ ಮುಂದುವರೆದ ಪಾಶ್ಚಿಮಾತ್ಯ ದೇಶಗಳನ್ನು ಅಲುಗಾಡಿಸಿ ಬಿಟ್ಟ ಜಾಗತಿಕ ಹಣಕಾಸು ಕುಸಿತದ ಬಿಕ್ಕಟ್ಟು ಒಂದೆಡೆ ಬಂಡವಾಳಶಾಹಿ ವಿಜಯೋತ್ಸಾಹವನ್ನು  ತಣ್ಣಗಾಗಿಸಿ, ಅದರ ಸ್ಥಾನದಲ್ಲಿ ಆಳುವ ವರ್ಗಗಳ ನಡುವೆ  ಬಂಡವಾಳಶಾಹಿಯ ಭವಿಷ್ಯದ ದಾರಿಯ ಬಗ್ಗೆ ಚರ್ಚೆ ನಡೆಯುವಂತೆ ಮಾಡಿದೆ. ಇನ್ನೊಂದೆಡೆ,  ತಮ್ಮ ಆರ್ಥಿಕ ಹಕ್ಕುಗಳಿಗಾಗಿ ಮತ್ತು ತಾವು ಈ ಹಿಂದೆ ಗಳಿಸಿದ್ದ ಹಕ್ಕುಗಳ ರಕ್ಷಣೆಗಾಗಿ ವಿಶ್ವಾದ್ಯಂತ ಹೆಚ್ಚು ಹೆಚ್ಚು ಜನತೆ ಪ್ರತಿಭಟನೆಗಳಿಗೆ ಇಳಿಯುತ್ತಿದ್ದಾರೆ. ಅರಬ್ ಜಗತ್ತಿನಲ್ಲಿ ನಿರಂಕುಶ ಆಳ್ವಿಕೆಗಳ ವಿರುದ್ಧ ಜನತೆಯ ಬಂಡಾಯಗಳು ಪ್ರಮುಖ ರಾಜಕೀಯ ಬದಲಾವಣೆಗಳನ್ನು ತಂದಿವೆ.

'ಮಿತವ್ಯಯ'  ಎಂಬ ಮೋಸ
ಈ ಬಾರಿಯ ಬಂಡವಾಳಶಾಹಿ ಬಿಕ್ಕಟ್ಟು ಕೂಡ ಬೇಗನೇ ಪರಿಹಾರಗೊಳ್ಳುತ್ತದೆ, ಬಂಡವಾಳಶಾಹಿ ಮತ್ತೆ ಚಿಗುರಿಕೊಳ್ಳಬಲ್ಲದು ಎಂಬ ನಿರೀಕ್ಷೆ ಈ ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಹುಸಿಯಾಗಿದೆ. ಇದು ಅನಿರೀಕ್ಷಿತವೇನಲ್ಲ. ಏಕೆಂದರೆ ಈ ನವ-ಉದಾರವಾದಿಗಳು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿರುವುದು ಕೂಡ ಅದೇ ವಿಫಲ ನವ-ಉದಾರವಾದಿ ಚೌಕಟ್ಟಿನಲ್ಲಿಯೇ. ಸಬ್ಪ್ರೈಮ್ ಅಂದರೆ ಅಪಾತ್ರ ಸಾಲಗಳ ಮೂಲಕ ಈ ಬಿಕ್ಕಟ್ಟನ್ನು ತಂದ ಕಾರ್ಪೋರೇಟ್ಗಳನ್ನು ಶಿಕ್ಷಿಸುವ ಬದಲು ಅವುಗಳಿಗೇ 'ಪಾರು ಯೋಜನೆಗಳ'(ಬೇಲೌಟ್ ಪ್ಯಾಕೇಜುಗಳ) ಹೆಸರಿನಲ್ಲಿ ಅಗಾಧ ಹಣವನ್ನು ಕೊಡಮಾಡಿ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಾಯಿತು. ಸರಕಾರಗಳು ಸಾಲಗಳನ್ನೆತ್ತಿ ಸಂಗ್ರಹಿಸಿದ ಮೊತ್ತಗಳಿಂದ ಕೊಟ್ಟ ಈ ಬೇಲೌಟುಗಳಿಂದಾಗಿ ಹಲವಾರು ದೇಶಗಳಲ್ಲಿ ಸರಕಾರಗಳು ನಿಭಾಯಿಸಲಾಗದಂತಹ ಹಣಕಾಸು ಕೊರತೆಗಳಲ್ಲಿ ಸಿಲುಕಿ ಕೊಂಡವು. ಹೀಗೆ ಕಾರ್ಪೋರೇಟುಗಳ ದಿವಾಳಿಗಳನ್ನು ಸರಕಾರಗಳ ಸಾರ್ವಭೌಮ ದಿವಾಳಿಗಳಾಗಿ ಪರಿವರ್ತಿಸಲಾಯಿತು. ಹೀಗೆ ಸಾರ್ವಭೌಮ ದಿವಾಳಿಗಳ ಬೆದರಿಕೆ ಉಂಟಾದಾಗ, ಸರಕಾರದ ಖರ್ಚುಗಳನ್ನು ತೀವ್ರವಾಗಿ ಇಳಿಸಬೇಕಾದ ಪ್ರಮೇಯ ಉಂಟಾಯಿತು. ಶ್ರೀಮಂತ ವಿಭಾಗಗಳ ಸವಲತ್ತುಗಳನ್ನು ಮುಟ್ಟಲು ಇವರ ನವ-ಉದಾರವಾದದಲ್ಲಿ ಅವಕಾಶವಿಲ್ಲವಾದ್ದರಿಂದ ಇದನ್ನು ಸರಕಾರ ಮಾಡುವ ಸಾಮಾಜಿಕ ಖರ್ಚುಗಳಲ್ಲಿ  ತೀವ್ರವಾದ ಕಡಿತಗಳನ್ನು ಹೇರುವ ಮೂಲಕ ಮತ್ತು ದುಡಿಯುವ ಜನಗಳ ಮೇಲೆ ಇನ್ನಷ್ಟು ಭಾರವಾದ ಹೊರೆಗಳನ್ನು ಹಾಕುವ ಮೂಲಕ ಮಾತ್ರವೇ ಸಾಧ್ಯವಿತ್ತು. ಆದ್ದರಿಂದಲೇ ದುಡಿಯುವ ಜನಗಳ ಸಂಬಳಗಳ ಸ್ತಂಭನ, ಕೆಲಸದ ಗಂಟೆಗಳ ಹೆಚ್ಚಳ, ನಿವೃತ್ತಿ ಸೌಲಭ್ಯಗಳನ್ನು ಅರ್ಧಕ್ಕಿಳಿಸುವುದು ಮುಂತಾದ ಕ್ರಮಗಳನ್ನು ತರಲಾಯಿತು ಇವನ್ನು ಅವರು 'ಮಿತವ್ಯಯ'ದ ಕ್ರಮಗಳೆಂದು ಕರೆಯುತ್ತಾರೆ. 
ಸಹಜವಾಗಿಯೇ ಇಂತಹ 'ಮಿತವ್ಯಯ'ಗಳ ಮೂಲಕ ತಾವೇ ತಂದ ಬಿಕ್ಕಟ್ಟಿನ ಹೊರೆಯನ್ನು ಸಾಮಾನ್ಯ ಜನರಿಗೆ ವರ್ಗಾಯಿಸಲು ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಆಳುವ ವರ್ಗಗಳು ತೆಗೆದುಕೊಂಡಿರುವ ಕ್ರಮಗಳಿಂದಾಗಿ ಅಮೇರಿಕಾ, ಯೂರೋಪ್ ಮತ್ತು ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಸಂಘರ್ಷಗಳು ಮತ್ತು ಹೋರಾಟಗಳು ಭುಗಿಲೆದ್ದಿವೆ. ಯೂರೋಪ್ನಲ್ಲಿ ಸಾಲ ಬಿಕ್ಕಟ್ಟಿನ ಕೇಂದ್ರ ಬಿಂದುವಾದ ಗ್ರೀಸ್ನಲ್ಲಿ, ಕಳೆದೆರಡು ವರ್ಷಗಳಿಂದ ನಿರಂತರವಾದ ಪ್ರತಿಭಟನೆಗಳು ಮತ್ತು ಸಾರ್ವತ್ರಿಕ ಮುಷ್ಕರಗಳು ನಡೆಯುತ್ತಿವೆ. ಸ್ಪೈನ್ ದೇಶದಲ್ಲಿ ಮುಖ್ಯವಾಗಿ ಯುವ ಜನತೆಯ ಬೃಹತ್ ಹೋರಾಟಗಳು  ನಡೆದಿದ್ದರೆ, ಪೋರ್ಚುಗಲ್, ಇಟಲಿ, ಫ್ರಾನ್ಸ್, ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಕಾರ್ಮಿಕರ ಬೃಹತ್ ಸಾರ್ವತ್ರಿಕ ಮುಷ್ಕರಗಳು ನಡೆದಿವೆ. ಶಿಕ್ಷಣಕ್ಕೆ ಸಾರ್ವಜನಿಕ ವೆಚ್ಚದಲ್ಲಿ ಕಡಿತ ಮತ್ತು ಬೋಧನಾ ಶುಲ್ಕಗಳ ಹೆಚ್ಚಳದ ವಿರುದ್ಧದ ಹೋರಾಟಗಳಲ್ಲಿ ವಿದ್ಯಾರ್ಥಿ-ಯುವಜನರು  ಮುಂಚೂಣಿಯಲ್ಲಿದ್ದಾರೆ.

ಮೇದಿನ 2012 
ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಕಾರ್ಮಿಕ ದಿನವಾಗಿ ಕಳೆದ ಒಂದು ಶತಮಾನಕ್ಕೂ ಹೆಚ್ಚು ಸಮಯದಿಂದ ಜಗತ್ತಿನಾದ್ಯಂತ ಆಚರಿಸುತ್ತಿರುವ ಮೇ ದಿನ ಈ ವರ್ಷ ಹೊಸ ಅರ್ಥಪಡೆದುಕೊಂಡಂತೆ ಕಾಣುತ್ತಿದೆ. ಇದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಹುಟ್ಟು ಹಾಕಿದ ಜಾಗತಿಕ ಆಥರ್ಿಕ ಬಿಕ್ಕಟ್ಟಿನ ಅವಧಿಯಲ್ಲಿನ ಮೊದಲ ಮೇದಿನವೇನೂ ಅಲ್ಲವಾದರೂ, ಈ ಬಿಕ್ಕಟ್ಟಿಗೆ ಬಂಡವಾಳಶಾಹಿಯ ಭದ್ರಕೋಟೆಯೆನಿಸಿದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲೇ ಈ ಬಾರಿ ಹೊಸ ಸ್ಪಂದನೆ ದೊರೆತಿದೆ. 


'ನಾವು 99%, ಮೇ ದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ'-ಈ ಘೋಷಣೆ ಈ ವರ್ಷದ ಮೇ ದಿನದ ವಿಶೇಷವಾಗಿತ್ತು.  ಸಪ್ಟೆಂಬರ್ನಲ್ಲಿ ಈಜಿಪ್ಟಿನ ರಾಜಧಾನಿ ಕೈರೋ ಮತ್ತು ಟ್ಯುನೀಸಿಯಾದ ಟ್ಯುನಿಸ್ನಲ್ಲಿ  ಅರಳಿದ 'ಅರಬ್ ವಸಂತ'ದ ಸ್ಫೂರ್ತಿಯಿಂದ ಅಮೆರಿಕದಲ್ಲಿ ಆರಂಭವಾಗಿ ಜಗತ್ತಿನ 150ಕ್ಕೂ ಹೆಚ್ಚು ನಗರಗಳಿಗೆ ಹಬ್ಬಿದ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' (Occupy Wallstreet) ಚಳುವಳಿ ಅಮೆರಿಕದಲ್ಲಿ ಪೋಲಿಸರ ಸತತ ದಾಳಿ, ಚಳಿಗಾಲ ಮತ್ತು ಸೈದ್ಧಾಂತಿಕ-ಸಂಘಟನಾ ಕೊರತೆಗಳಿಂದ ಬಹಳ ಮಟ್ಟಿಗೆ ತಣ್ಣಗಾಗಿತ್ತು. ಕಳೆದ ತಿಂಗಳು ಈ ಚಳುವಳಿಯಲ್ಲಿ ಮೂಡಿಬಂದ ಗುಂಪುಗಳು ಮೇ 1 ರಂದು ಜಗತ್ತಿನಾದ್ಯಂತ ಈ ಚಳುವಳಿಯ ಪುನಶ್ಚೇತನಕ್ಕೆ ಮತ್ತು ಬ್ಯಾಂಕು-ಕಾರ್ಪೋರೆಟ್ಗಳ ಮೇಲೆ ಪುನಃ ಸತತ ದಾಳಿ ಆರಂಭಿಸಬೇಕೆಂದು ಕರೆ ಕೊಟ್ಟಿದ್ದವು. ಮೇ ದಿನದ ಹುಟ್ಟು ದೇಶವಾದರೂ, ಆ ದಿನವನ್ನು ಹೋರಾಟದ ದಿನವಾಗಿ ಆಚರಿಸುವ ಸಂಪ್ರದಾಯ ಹೋಗೇ ಬಿಟ್ಟಿದ್ದ ಅಮೆರಿಕದಲ್ಲಿ, ಮೇ ದಿನವನ್ನು ಇದಕ್ಕಾಗಿ ಆರಿಸಿಕೊಂಡಿದ್ದು ಒಂದು ಮಹತ್ವಪೂರ್ಣ ಬೆಳವಣಿಗೆ. ಮೇ ದಿನದಂದು ಅಮೆರಿಕದಲ್ಲಿ 'ಸಾರ್ವತ್ರಿಕ ಮುಷ್ಕರ'ಕ್ಕೆ (ಒ.ಡಬ್ಲ್ಯೂ.ಎಸ್.) ಕರೆ ಕೊಟ್ಟಿದ್ದು ಇನ್ನೂ ಹೆಚ್ಚು ಮಹತ್ವದ್ದಾಗಿತ್ತು. 
ಪೂರ್ವದ (ಆಸ್ಟ್ರೇಲಿಯಾದ) ಸಿಡ್ನಿಯಿಂದ ಪಶ್ಚಿಮದ (ಅಮೆರಿಕದ) ಸ್ಯಾನ್ಫ್ರಾನ್ಸ್ಸಿಸ್ಕೊವರೆಗೆ ಅಭಿವೃದ್ಧಿ ಹೊಂದಿರುವ ಬಂಡವಾಳಶಾಹಿ ದೇಶಗಳ ನೂರಾರು ನಗರಗಳಲ್ಲಿ 'ನಾವು 99%, ಮೇದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ' ಎಂಬ ಯುದ್ಧಘೋಷಣೆ ಮೇ ದಿನದ ಕಾಮರ್ಿಕರ ಪ್ರದರ್ಶನಗಳೊಂದಿಗೆ ಮಿಳಿತವಾಗಿ ಮಾರ್ದನಿಗೊಂಡಿತು. ಅಮೆರಿಕದಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ರಾಷ್ಟ್ರಮಟ್ಟದ ಕಾರ್ಮಿಕ ಸಂಘಟನೆಗಳು ಕರೆ ಕೊಡದಿದ್ದರೂ, ಹಲವಾರು ಕಡೆ ಸ್ಥಳೀಯ ಯೂನಿಯನ್ನುಗಳು ಮುಷ್ಕರಕ್ಕೆ ಕರೆ ಕೊಟ್ಟವು. ಮುಷ್ಕರಗಳೇನೋ ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ. ಆದರೆ ಮೇ ದಿನದ ಪ್ರದರ್ಶನಗಳು ಅಮೆರಿಕದಲ್ಲಿ ದೊಡ್ಡ ರೀತಿಯಲ್ಲಿ ನಡೆದವು ಎನ್ನುವುದೇ ದೊಡ್ಡ ಸಾಧನೆ.  ಈ ಮೇದಿನದ ಭಾರೀ ಪ್ರದರ್ಶನಗಳು ಎಷ್ಟರ ಮಟ್ಟಿಗೆ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' ಚಳುವಳಿಯನ್ನು ಪುನಶ್ಚೇತನಗೊಳಿಸುತ್ತವೆ ಎಂದು ಕಾದು ನೋಡಬೇಕು. ಅಧ್ಯಕ್ಷೀಯ ಚುನಾವಣೆಯ ಈ ವರ್ಷ ಈ ಚಳುವಳಿ ಚುರುಕುಗೊಂಡರೆ ಅಮೆರಿಕದ ರಾಜಕೀಯ ಚಿತ್ರವೇ ಬದಲಾಗಬಹುದು.

ಜಗತ್ತಿನ ಇತರ ಭಾಗಗಳಲ್ಲಿಯೂ ಮೇದಿನ ಈ ಬಾರಿ ಹೆಚ್ಚಿನ ಹುರುಪಿನಿಂದ ಆಚರಿಸಲ್ಪಟ್ಟಿತು. ಯುರೋಪಿನಾದ್ಯಂತ ಅಲ್ಲಿಯ ಆಳುವ ವರ್ಗಗಳು 'ಮಿತವ್ಯಯ' ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುತ್ತಿರುವುದರ ವಿರುದ್ಧ ಮೇದಿನದಂದು ವಿಶೇಷ ಆಕ್ರೋಶ ವ್ಯಕ್ತಗೊಂಡಿತು. 

ಅಧಿಕಾರಸ್ಥರ ಸೋಲುಗಳ ಸಾಲುದೀಪ
ಮೇ ದಿನಾಚರಣೆಯ ಬೆನ್ನಹಿಂದೆಯೇ ಯುರೋಪಿನಲ್ಲಿ ನಡೆದ ಚುನಾವಣೆಗಳಲ್ಲಿ ಇದು ಸ್ಪಷ್ಟವಾಗಿ ಕಂಡು ಬಂದಿದೆ. 'ಮಿತವ್ಯಯ'ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುವುದನ್ನು ಒಪ್ಪಿಕೊಂಡಿರುವ ಪಕ್ಷಗಳನ್ನು ಯುರೋಪಿನ ಮತದಾರರು ನಿರ್ಣಯಕವಾಗಿ ತಿರಸ್ಕರಿಸುತ್ತಿದ್ದಾರೆ. ಯುರೋಪಿನ ಹಣಕಾಸು ಬಂಡವಾಳಿಗರನ್ನು ಮತ್ತು ಖಾಸಗಿ ಬ್ಯಾಂಕುಗಳು, ಕಾರ್ಪೋರೇಟ್ಗಳನ್ನು ಉಳಿಸಲು ಜರ್ಮನಿ, ಫ್ರಾನ್ಸ್ಸ್ನಂತಹ ಬಲಿಷ್ಟ ಯುರೋಪಿಯನ್ ದೇಶಗಳ ಆಳುವ ಮಂದಿ ತಮ್ಮ ಜನಗಳ ಮೇಲೆ ಮತ್ತು ಯುರೋಪಿನ ಇತರ ದೇಶಗಳ ಮೇಲೆ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಹೇರಿರುವುದಕ್ಕೆ ಈಗ ಬಲವಾದ ಪ್ರತಿಭಟನೆ ವ್ಯಕ್ತವಾಗುತ್ತಿದೆ. 

ಇಂತಹ ಪ್ರತಿಭಟನೆಗಳನ್ನು ನಿರೀಕ್ಷಿಸಿಯೇ ಗ್ರೀಸಿನಲ್ಲಿ ಚುನಾವಣೆಗಳನ್ನು ಮುಂದೂಡುವ ಪ್ರಯತ್ನಗಳು ವಿಫಲವಾದ ಮೇಲೆ ಅಲ್ಲಿ ಚುನಾವಣೆ ನಡೆಸಲೇ ಬೇಕಾಯಿತು. ಇದರಲ್ಲಿ 'ಮಿತವ್ಯಯ'ದ ಪರವಾಗಿರುವ ರಾಜಕೀಯ ಪಕ್ಷಗಳು ಪರಾಭವಗೊಂಡಿವೆ. ಇನ್ನೊಂದೆಡೆ ಉಗ್ರ ಬಲಪಂಥೀಯ ಪಕ್ಷಗಳೂ ಜನಗಳ ಅಸಂತೃಪ್ತಿಯ ಪ್ರಯೋಜನವನ್ನು ಸ್ವಲ್ಪ ಮಟ್ಟಿಗೆ ಪಡೆದಿವೆ. ಆದರೆ ಯುರೋಪಿನ ಜನಗಳ ಒಲವು ಎಡಶಕ್ತಿಗಳತ್ತ ವಾಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. 'ಮಿತವ್ಯಯ'ದ ಪರವಾಗಿರುವ ಆಳುವ ಪಕ್ಷಗಳ ಕೂಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಸದ್ಯ ಅಲ್ಲಿ ಜರ್ಮನಿ ಮತ್ತು ಫ್ರಾನ್ಸಿನ ಒತ್ತಡಗಳಿಗೆ ತಲೆಬಾಗಿ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಅನುಸರಿಸಬಹುದಾದ ಪಕ್ಷಗಳು ಸರಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಇತರರು ಸರಕಾರ ರಚಿಸುವುದಕ್ಕೆ ಜರ್ಮನಿ, ಫ್ರಾನ್ಸ್ ಮುಂತಾದ ಬಲಿಷ್ಟ ದೇಶಗಳ ಆಳುವ ಮಂದಿಗಳು ಬಿಡಲಾರವು. ಇಂತಹ ಅಸ್ಥಿರತೆಯ ವಾತಾವರಣದಲ್ಲಿ ಗ್ರೀಸಿನಲ್ಲಿ ಮತ್ತೆ ಚುನಾವಣೆ ನಡೆಯಬೇಕಾಗಿ ಬರಬಹುದು, ಹಾಗಾದಲ್ಲಿ ಎಡಪಕ್ಷಗಳಿಗೆ ನಿರ್ಣಾಯಕ ಬೆಂಬಲ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇತ್ತ ಫ್ರಾನ್ಸ್ಸಿನಲ್ಲೇ ಸೋಶಲಿಸ್ಟ್ ಪಕ್ಷದ ಅಭ್ಯರ್ಥಿ 18 ವರ್ಷಗಳ ನಂತರ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿರುವುದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಿಗರಿಗೆ ಭಾರೀ ಆಘಾತವುಂಟು ಮಾಡಿದೆ. ಈ ಹಿಂದೆ ಫ್ರಾನ್ಸಿನ ಸೋಶಲಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಾಗ ಬಂಡವಾಳಶಾಹಿ ಶಕ್ತಿಗಳೊಂದಿಗೆ  ರಾಜಿ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರಿದ್ದರೂ, ಈ ಬಾರಿ ಅದು ಬಯಸಿದರೂ ಹಾಗೆ ಮಾಡಲಾಗದಂತಹ ಸನ್ನಿವೇಶ ಉಂಟಾಗಿದೆ. ಹಣಕಾಸು ಬಂಡವಾಳಿಗರನ್ನು ಉಳಿಸಲು ಜನಸಾಮಾನ್ಯರ ಸೌಲಭ್ಯಗಳನ್ನು ತೀವ್ರವಾಗಿ ಕಡಿತ ಮಾಡುವ 'ಮಿತವ್ಯಯ'ದ ಕಾರ್ಯಕ್ರಮಗಳು ಯುರೋಪಿಗೆ ಅನಿವಾರ್ಯವೇನೂ ಅಲ್ಲ ಎಂದು ಈಗ ಚುನಾಯಿತರಾಗಿರುವ ಸೋಶಲಿಸ್ಟ್ ಅಧ್ಯಕ್ಷರು ಸ್ಪಷ್ಟವಾಗಿ ಸಾರಿದ್ದಾರೆ. ಅತ್ತ ಜರ್ಮನಿಯಲ್ಲೂ ಅತ್ಯಂತ ಹೆಚ್ಚು ಜನಸಂಖ್ಯೆಯ ಪ್ರಾಂತ್ಯ ಉತ್ತರ ರೈನ್-ವೆಸ್ಟ್ಫಾಲಿಯಾದಲ್ಲಿ ಆಳುವ ಬಲಪಂಥೀಯ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷ ಮಧ್ಯ-ಎಡಪಂಥೀಯ ಶಕ್ತಿಗಳ ಎದುರು ಭಾರೀ ಪರಾಭವನ್ನು ಉಂಡಿದೆ. ನೆದರ್ಲೆಂಡಿನಲ್ಲಿ ಕೂಡ 'ಮಿತವ್ಯಯ'ದ ಪರವಾಗಿರುವ ಪಕ್ಷದ ಸರಕಾರ ಕುಸಿದು ಮತ್ತೆ ಚುನಾವಣೆಗಳು ನಡೆಯಬೇಕಾಗಿದೆ. ಯುರೋಪಿನ ಆಳುವ ವರ್ಗಗಳು ಮತ್ತು ಜಾಗತಿಕ ಹಣಕಾಸು ಬಂಡವಾಳಿಗರು ಹೇರಿರುವ ತಮ್ಮನ್ನು ಉಳಿಸಿಕೊಳ್ಳಲು ಜನಸಾಮಾನ್ಯರ ಮೇಲೆ 'ಮಿತವ್ಯ'ಯ ದ ಹೆಸರಿನಲ್ಲಿ ದಾಳಿಗಳನ್ನು ಆರಂಭಿಸಿದ ಮೇಲೆ ಉರುಳಿದ ಯುರೋಪಿಯನ್ ಸರಕಾರಗಳಲ್ಲಿ ಬಲಪಂಥೀಯ ಸಾರ್ಕೋಝಿ ಸರಕಾರ ಹನ್ನೊಂದನೆಯದ್ದು ಎಂಬುದು ಗಮನಾರ್ಹ.

ನಿಜ, ಯುರೋಪಿನ ಈ ಚುನಾವಣೆಗಳಲ್ಲಿ ಈ 'ದೋಷಯುಕ್ತ ವ್ಯವಸ್ಥೆ'ಗೆ ಒಂದು ಬಲಿಷ್ಟ ರಾಜಕೀಯ ಪರ್ಯಾಯ ಹೊರ ಹೊಮ್ಮಿಲ್ಲ. ಇನ್ನೊಂದೆಡೆ, ಬಲಪಂಥೀಯ ಶಕ್ತಿಗಳ ಬಲವೂ ಹೆಚ್ಚಿರುವ ಆತಂಕಕಾರಿ ಬೆಳವಣಿಗೆಯೂ ಕಾಣ ಬಂದಿದೆ. ಆದರೂ ಜನತೆಯನ್ನು ಇನ್ನಷ್ಟು ಆರ್ಥಿಕ ದಾಳಿಗಳಿಂದ ರಕ್ಷಿಸುವುದು ಮತ್ತು ರಾಕ್ಷಸೀ ಫ್ಯಾಸಿಸ್ಟ್ ಶಕ್ತಿಗಳು ತಲೆಯೆತ್ತದಂತೆ ತಡೆಯುವುದು ಒಂದು ರಾಜಕೀಯ ಪರ್ಯಾಯದ ಬಲದಿಂದ ಮಾತ್ರ ಸಾಧ್ಯ, ಅದನ್ನು ಸಮಾಜವಾದ ಮಾತ್ರವೇ ಕೊಡಬಲ್ಲದು ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.

ಆರಂಭದಲ್ಲಿ ಹೇಳಿದಂತೆ, ಎರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ಕುಸಿದಾಗ ಇನ್ನು ಸಮಾಜವಾದದ ಕತೆ ಮುಗಿಯಿತು ಎಂದು ಚಪ್ಪಾಳೆ ತಟ್ಟಿ ಕೇಕೆ ಹಾಕಿದವರು ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರಖ್ಯಾತ ಎಡಪಂಥೀಯ ಅರ್ಥಶಾಸ್ತ್ರಜ್ಞ ಪ್ರೊ, ಪ್ರಭಾತ್ ಪಟ್ನಾಯಕ್ ಹೇಳಿರುವಂತೆ, ಬಂಡವಾಳದ ಆಳ್ವಿಕೆಯ ವಿರುದ್ಧ ಒಂದು ಹೊಸ ಕ್ರಾಂತಿಕಾರಿ ಅಲೆ ಎದ್ದು ಬರುವ ಸಂಕೇತಗಳು ಕಾಣುತ್ತಿವೆ, ನಾವೀಗ 'ಇತಿಹಾಸದ ಅಂತ್ಯ'ದಲ್ಲಿ ಇಲ್ಲ, ಬದಲಾಗಿ ಒಂದು ಹೊಸ ಇತಿಹಾಸದ ಆರಂಭದಲ್ಲಿ ಇದ್ದೇವೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗಿ ಕಾಣ ಬರುತ್ತಿದೆ.
                                                                                                               - ವೇದರಾಜ್.ಎನ್.ಕೆ


Wednesday 27 June 2012

ಬಿಟ್ಟು ಬಿಡು ಈ ಮಂತ್ರ ಈ ಪೂಜೆ


ಬಿಟ್ಟು ಬಿಡು ಈ ಮಂತ್ರ, ಈ ಪೂಜೆ
ಈ ಜಪ ಮಣಿಗಳೆಣಿಕೆ,
ದೇಗುಲದ ಬಾಗಿಲಗಳೆಲ್ಲವನು ಮುಚ್ಚಿ
ಕತ್ತಲೆಯ ಮೂಲೆಯಲಿ ಓರ್ವನೇ ಕುಳಿತು
ಆರ ಪೂಜೆಯನು ಗೈಯುತಿರುವೆ?
ಕಣ್ತೆರೆದು ನೋಡು, ಓ ಭಕುತ,
ನಿನ್ನ ದೇವ ನಿನ್ನೆದುರಿನಲ್ಲಿಲ್ಲ.

ಅವನಿಹನು ಒಕ್ಕಲಿಗ ನೆಲವನುಳುತಿರುವಲ್ಲಿ,
ಅವನಿಹನು ಕಲ್ಲುಟಿಗ ಕಲ್ಲೊಡೆಯುತಿರುವಲ್ಲಿ,
ಅವನಿಹನು ಅವರೊಡನೆ ಬಿಸಿಲಿಲ್ಲಿ, ಮಳೆಯಲ್ಲಿ
ಅವನ ಉಡಿಗೆಗಳೆಲ್ಲ ಮಿಂದಿಹವು ಧೂಳಿನಲಿ
ಅವನಂತೆಯೇ ನೀನು,
ನಿನ್ನ ಮಡಿಯುಡಿಗೆಗಳ ತೊಡೆದು,
ಧೂಳುತುಂಬಿದ ಈ ಮಣ್ಣಿಗಿಳಿದು-ಬಾ.

ಮುಕ್ತಿ? ಎಲ್ಲಿಹುದು ಮುಕ್ತಿ?
ನಮ್ಮೊಡೆಯನೇ ಬಲು ಸಂತಸದಿಂ,
ಜಗದ ನಿರ್ಮಾಣಕಾರ್ಯದ ಬಂಧನವ
ಕೈಗೆತ್ತಿಕೊಂಡಿರಿವ.
ನಮ್ಮೆಲ್ಲರೊಡನೆ ಆತ,
ಅನಂತ ಬಂಧನದಲ್ಲಿರುವ.

ನಿನ್ನ ಧ್ಯಾನದೂಳಗಿಂದ ಎಚ್ಚೆತ್ತು ಬಾ
ಆ ಹೂವು ಆ ಧೂಪ ದೀಪಗಳ ಬಿಟ್ಟು ಬಾ.
ನಿನ್ನ ಮೈ ಮೇಣ್ ತೊಡಿಗೆಗಳು
ಕೊಳೆಯಾದರೇನು? ಹರಿದರೇನು?
ನಿನ್ನ ಹಣೆ ಬೆವರ ಸುರಿಸುತ್ತ,
ಶ್ರಮವ ಗೈಯುತ್ತ,
ಅವನೊಡನೆ ನಿಲ್ಲು, ಮೇಣ್
ಅವನ ಕಾಣು.
- ಡಾ.ರವೀಂದ್ರನಾಥ್ ಟ್ಯಾಗೂರ್